Back
ಮಳೆನೀರು ಕೊಯ್ಲು

ಹಿನ್ನೆಲೆ

ನೀರು ಸಕಲ ಜೀವ ರಾಶಿಗಳಿಗೆ ಜೀವ ಜಲ. ಭೂಮಿಯಲ್ಲಿರುವ ಎಲ್ಲರೂ ಅದನ್ನು ಒಂದಲ್ಲ ಒಂದು ಚಟುವಟಿಕೆಗಳಿಗೆ ಬಳಸುತ್ತಾರೆ. ನಮ್ಮ ದಿನ ನಿತ್ಯದ ಅವಶ್ಯಕತೆಗಳಿಗೆ ನೀರು ಅತ್ಯಗತ್ಯ. ಭೂಮಿಯ ಮೇಲ್ಮಟ್ಟದಲ್ಲಿರುವ ನೀರು ನಮ್ಮ ಬೆಡಿಕೆಗಳನ್ನು ಪೂರೈಸಲು ಸಾಲದ್ದರಿಂದ ನಾವೀಗ ಅಂತರ್ಜಲವನ್ನು ಅವಲಂಬಿಸುವ ಅನಿವಾರ್ಯತೆ ಒದಗಿದೆ. ನಗರೀಕರಣದ ಪ್ರಭಾವದಿಂದಾಗಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದರಿಂದಾಗಿ ಮಳೆ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಜನರ ಬೇಡಿಕೆಯನ್ನು ಪೂರೈಸುವಂಥ ಪರ್ಯಾಯ ನೀರಿನ ಮೂಲವೊಂದರ ಅಗತ್ಯವಿದೆ. ಮಳೆನೀರು ಎನ್ನುವುದು ಶುಧ್ಧವಾದ ಮತ್ತು ಸುಲಭದಲ್ಲಿ ದೊರೆಯುವ ನೀರಿನ ಮೂಲ. ಅದನ್ನು “ಬಿದ್ದಲ್ಲೇ ಹಿಡಿದಿಟ್ಟು” ನಮ್ಮ ಅಗತ್ಯಗಳನ್ನು ಪೂರೈಸಬಹುದು. ಕೊರತೆಯನ್ನು ನೀಗಿಸಬಹುದು. ಫ್ಲೋರೈಡ್‌ ಮತ್ತು ಆರ್ಸೆನಿಕ್‌ ಅಂಶ ಹೆಚ್ಚಿರುವ ಗುಡ್ಡಗಾಡು ಮತ್ತು  ಕುಡಿಯುವ  ನೀರಿನ ಸಮಸ್ಯೆ ಎದುರಿಸುತ್ತರುವ ಪ್ರದೇಶಗಳಲ್ಲಿ ಮಳೆ ನೀರಿನ ಸುಗ್ಗಿ ಸಾಂಪ್ರದಾಯಿಕ ನೀರಿನ ಮೂಲಗಳಿಗೆ ಪರ್ಯಾಯವಾಗಿ ಹೊರಹೊಮ್ಮಿದೆ. ಮಳೆ ನೀರು ಹರಿದು ಹೋಗಿ ಪೋಲಾಗದಂತೆ ಮುಂದಾಲೋಚನೆಯಿಂದ ವೈಜ್ಙಾನಿಕ ರೀತಿಯಲ್ಲಿ ಸಂಗ್ರಹಿಸಿ, ಶೇಖರಿಸಿಡುವ ವಿಧಾನವೇ ಮಳೆ ನೀರಿನ ಕೊಯ್ಲು.

ಮಳೆ ನೀರಿನ ಕೊಯ್ಲುಯಿಂದಾಗುವ ಉಪಯೋಗಗಳು :

  1. ನೀರಿನ ಅವಶ್ಯಕತೆ ಪೂರೈಸಲು ಸರಳ ಮತ್ತು ಪರಿಸರ ಸ್ನೇಹಿ ವಿಧಾನ.
  2. ಅಸಮರ್ಪಕ ನೀರಿನ ಮೂಲವಿರುವ ಪ್ರದೇಶಗಳಿಗೆ ಮಳೆ ನೀರಿನ ಸುಗ್ಗಿಯು ನೀರಿನ ಅವಶ್ಯಕತೆಗಳಿಗೆ ಒಂದು ಸೂಕ್ತ ಪರಿಹಾರವಾಗಿರುತ್ತದೆ.
  3. ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತದೆ.
  4. ಅಂತರ್ಜಲದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
  5. ಬರದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
  6. ಮಳೆ ನೀರು ಚರಂಡಿಗಳಲ್ಲಿ ಹರಿದು, ಪ್ರವಾಹ ಬಂದು ಅಪಾಯವುಂಟಾಗುವುದನ್ನು ಮತ್ತು ವ್ಯರ್ಥವಾಗುವುದನ್ನು ಕಡಿಮೆ ಮಾಡಬಹುದು.
  7. ಹೆಚ್ಚು ಮಳೆಯಾದ ಸಂದರ್ಭದಲ್ಲಿ ರಸ್ತೆ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದನ್ನು ಕಡಿಮೆ ಮಾಡುತ್ತದೆ.
  8. ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತದೆ.
  9. ಕಡಿಮೆ ವೆಚ್ಚದ ತಂತ್ರಜ್ಞಾನವಾಗಿದ್ದು, ಸುಲಭವಾಗಿ ನಿರ್ವಹಿಸಬಹುದಾಗಿದೆ.
  10. ನೀರು ಮತ್ತು ವಿದ್ಯುಚ್ಛಕ್ತಿ ವೆಚ್ಚಗಳಲ್ಲಿ ಗಣನೀಯ ಉಳಿತಾಯ.

ಮಳೆ ನೀರಿನ ಸುಗ್ಗಿಯ ಅವಶ್ಯಕತೆಗಳು

“ಮಳೆ ನೀರಿನ ಸಂಗ್ರಹಣೆ ಎಂದರೆ ಮಳೆ ನೀರನ್ನು ಹಿಡಿದು ಶೇಖರಿಸಿ ದಿನನಿತ್ಯದ ಬಳಕೆಗೆ ಉಪಯೋಗಿಸುವುದು ಅಥವಾ ಅಂತರ್ಜಲ ಮಟ್ಟವನ್ನು ಪುನಶ್ಚೇತನ ಗೊಳಿಸಲು ಭೂಮಿಯಲ್ಲಿ ಇಂಗುವಂತೆ ಮಾಡುವುದು.”

  1. ನೀರಿನ ಕೊರತೆ ಹೆಚ್ಚಾಗುತ್ತಿರುವುದರಿಂದ, ನಮ್ಮ ದಿನನಿತ್ಯದ ಪೂರೈಕೆಗೆ ಸ್ವಾವಲಂಬಿಯಾಗಿ ನೀರಿನ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆಯಿದೆ.
  2. ಸದಾ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಗರ ಪ್ರದೇಶದ ನೀರು ಸರಬರಾಜು ವ್ಯವಸ್ಥೆಯು ತೀವ್ರ ಒತ್ತಡದಲ್ಲಿ ಸಿಲುಕಿದೆ.
  3. ಅಂತರ್ಜಲದ ಮಟ್ಟವು ಕ್ಷೀಣಿಸುತ್ತಿದೆ ಮತ್ತು ಮಲಿನಗೊಳ್ಳುತ್ತಿದೆ.
  4. ಅಡೆತಡೆಯಿಲ್ಲದೆ ಹರಿಯುವ ಮಳೆ ನೀರಿನಿಂದಾಗಿ ಮಣ್ಣಿನ ಸವಕಳಿ
  5. ಕಲುಷಿತ ನೀರಿನ ಬಳಕೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ
  6. ಮಳೆ ನೀರು ಹೆಚ್ಚಾಗಿ ಹರಿದು ಪ್ರವಾಹ, ಮಣ್ಣು ಸವಕಳಿ, ಭೂಕುಸಿತ ಇತರೆ ಅಪಾಯವುಂಟಾಗುವ ಸಂದರ್ಭ
  7. ಹೆಚ್ಚು ಮಳೆಯಾದ ಸಂದರ್ಭದಲ್ಲಿ ರಸ್ತೆ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದು
  8. ಬರ ಮತ್ತು ನೆರೆ ಹೆಚ್ಚಾಗುವ ಅಪಾಯ

ಮಳೆನೀರು ಕೊಯ್ಲು ಸಹಾಯವಾಣಿ ಕೇಂದ್ರ

(ಬೆಂಗಳೂರು ನಗರದ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ಜಲ ನಿರ್ವಹಣಾ ಕಾರ್ಯಕ್ರಮ – ಸಹಾಯವಾಣಿ ಮತ್ತು ಸಹಕಾರ ವ್ವವಸ್ಥೆ)

 

ರಾಜ್ಯ ಸರಕಾರ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಯ ಮಹತ್ವ ಅರಿತು ಮೊದಲಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಮುಖಾಂತರ ಬೆಂಗಳೂರು ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಖಾಯಿದೆಯನ್ನು ನವೆಂಬರ್‌ 2009 ರಲ್ಲಿ ಜಾರಿಗೆ ತಂದಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಬೆಂಗಳೂರು ಜಲ ಮಂಡಳಿಯ ಸಹಯೋಗದೊಂದಿಗೆ ಎರಡು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಛೇರಿಯಲ್ಲಿ  ಮತ್ತೊಂದು ಭಾರತರತ್ನ ಸರ್‌ ಎಂ ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ, ಜಯನಗರ 5ನೇ ಹಂತ 40ನೇ ಅಡ್ಡ ರಸ್ತೆಯಲ್ಲಿರುವ ಒಂದೂವರೆ ಎಕರೆ ಜಾಗದಲ್ಲಿ ವಿನ್ಯಾಸಗೊಳಿಸಲಾಗಿರುವ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಒಟ್ಟು 26 ವಿವಿಧ ಮಳೆನೀರು ಸಂಗ್ರಹಣ ಮತ್ತು ಅಂತರ್ಜಲ ಮರುಪೂರಣ ಬಗೆಗಿನ ಪ್ರಾತ್ಯಕ್ಷಿತೆ ಹಾಗು ಮಾದರಿಗಳನ್ನು ಪ್ರದಶಿಸಲಾಗುತ್ತಿದೆ. ಇದು ಭಾರತದಲ್ಲೆ ಮೊಟ್ಟಮೊದಲ ಬಾರಿಗೆ ಮಳೆ ನೀರು ಸುಗ್ಗಿಗಾಗಿಯೆ ವಿನ್ಯಾಸಗೊಳಿಸಲಾಗಿದ್ದು ರಾಜ್ಯಕ್ಕೆ ಹೆಮ್ಮೆಯಾಗಿದೆ. ಈ ಮಳೆ ನೀರು ಸುಗ್ಗಿ ಕೇಂದ್ರವು ಮಳೆನೀರು ಕೊಯ್ಲು, ನೀರು ಸಂಗ್ರಹಿಸುವ ವ್ಯವಸ್ಥೆಗಳು, ಶೋಧನೆ ಮತ್ತು ಶೇಖರಣಾ ವ್ಯವಸ್ಥೆಗಳು ಮತ್ತು ಅಂತರ್ಜಲ ಮರುಪೂರಣ ವಿಧಾನಗಳ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಪರಿಹಾರವನ್ನು ನೀಡುತ್ತಾ ಬಂದಿದೆ.

ಈ ಸಹಾಯವಾಣಿ ಕೇಂದ್ರದ ಪ್ರಮುಖ ಇನ್ನೊಂದು ಧೈಯೊದ್ದೇಶವು ಬೆಂಗಳೂರಿನ ಅಭಿಯಂತರರು, ಆರ್ಕಿಟೆಕ್ಟ್‌ಗಳು ಮತ್ತು ಕೊಳಾಯಿ ಗುತ್ತಿಗೆದಾರರಿಗೆ ಮಳೆನೀರು ಕೊಯ್ಲು ಬಗ್ಗೆ ಅರಿವು ಮೂಡಿಸುವುದು ಹಾಗು ತರಬೇತಿ ನೀಡುವುದಾಗಿರುತ್ತದೆ. ಮಳೆನೀರು ಕೊಯ್ಲು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನುಏರ್ಪಡಿಸುತ್ತಾ ಬಂದಿದೆ. ಮಳೆನೀರು ಸಂಗ್ರಹಣ ಮತ್ತು ಅಂತರ್ಜಲ ಮರುಪೂರಣ ಸಂಪೂರ್ಣ ಮಾಹಿತಿಯನ್ನು ತಾಂತ್ರಿಕತೆಯೊಂದಿಗೆ ಇಲ್ಲಿ ಭೇಟಿ ನೀಡುವವರಿಗೆ  ಹಾಗು ದೂರವಾಣಿ ಮುಖಾಂತರ ವಿವರಿಸಿ ತಿಳಿಸಿಕೊಡಲಾಗುತ್ತದೆ.

ಅಭಿಯಂತರರು, ಆರ್ಕಿಟೆಕ್ಟ್‌ಗಳು ಮತ್ತು ಕೊಳಾಯಿ ಗುತ್ತಿಗೆದಾರರಿಗೆ ಮಳೆನೀರು ಕೊಯ್ಲು ತರಬೇತಿ ನೀಡಲು ಕೌಶಲ್ಯಾಭಿವೃದ್ದಿ ಕಾರ್ಯಕ್ರಮವನ್ನು ಪ್ರತಿ 3 ತಿಂಗಳಿಗೊಮ್ಮೆ ಆಯೊಜಿಸಲಾಗುತ್ತಿದ್ದು ಆರಂಭದಿಂದ ಒಟ್ಟು 86 ತರಬೇತಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ಸುಮಾರು 2200 ಮಂದಿ ತರಬೇತಿಯನ್ನು ಪಡೆದಿದ್ದು ಅವರು ತಮ್ಮ ವೃತ್ತಿಪರ ಸೇವೆಯನ್ನು ನೀಡುತ್ತಿದ್ದಾರೆ. 

ಮಳೆ ನೀರು ಕೊಯ್ಲುವಿನ ಸಹಾಯವಾಣಿ ಕೇಂದ್ರ ಸೇವೆಯನ್ನು ಜನಸಾಮಾನ್ಯರು ಉತ್ತಮವಾಗಿ ಬಳಸಿಕೊಳ್ಳುತ್ತದ್ದಾರೆ.  ಸುಮಾರು 331 ಶಾಲೆಗಳಿಂದ, 20100 ಶಾಲಾ ವಿಧ್ಯಾರ್ಥಿ ಮತ್ತು ಶಿಕ್ಷಕರು ಹಾಗು 109 ಕಾಲೇಜುಗಳಿಂದ 2850 ವಿಧ್ಯಾರ್ಥಿ ಮತ್ತು ಭೋಧಕವೃಂದದವರು ಬೆಂಗಳೂರಿನ ಸರ್‌ ಎಂ ವಿಶ್ವೇಶ್ವರೈಯ ಮಳೆ ನೀರು ಸುಗ್ಗಿ ಕೇಂದ್ರಕ್ಕೆ ಭೇಟಿ ನೀಡಿ ಅದರ ಉಪಯೋಗವನ್ನು ಪಡೆದುಕೊಂಡಿರುತ್ತಾರೆ. ಈವರೆಗೂ ಸುಮಾರು  40,000 ಕ್ಕೂ ಅಧಿಕ ಜನಸಾಮಾನ್ಯರು. ಅಧಿಕಾರಿಗಳು ಎಲ್ಲಾ ವರ್ಗದ ಸಾರ್ವಜನಿಕರು  ಮಳೆ ನೀರು ಕೊಯ್ಲುವಿನ ಸಹಾಯವಾಣಿ ಕೇಂದ್ರಗಳಿಗೆ ಬೇಟಿ ನೀಡಿ ಅಲ್ಲಿನ ಮಾದರಿಗಳು ಹಾಗು ಪ್ರಾತ್ಯಕ್ಷಿತೆಗಳನ್ನು ಕಂಡು ಮಳೆ ನೀರು ಕೊಯ್ಲುನ ಮಹತ್ವ ಮತ್ತು ಅವಶ್ಯಕತೆ ಅರಿತು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಜನರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಯನ್ನು ಸಂಗ್ರಹಿಸಿ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆ. ಸಹಾಯವಾಣಿಯ ಅಭಿಯಂತರರು ಮಳೆ ನೀರು ಕೊಯ್ಲು ಬಗೆಗಿನ ವಿವಿಧ ದೂರವಾಣಿ ಪ್ರಶ್ನೆಗಳಿಗೆ  ಮನವರಿಕೆವಾಗುವಂತಹ ಉತ್ತರಗಳನ್ನು  ನೀಡುತ್ತಾ ಬಂದಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ  ಸಹಾಯವಾಣಿಗಳ ಪರಿಶ್ರಮ ಇಂದು ಬೆಂಗಳೂರಿನ ನೀರಿನ ಕೊರತೆಯನ್ನು ತಗ್ಗಿಸಲು ಮತ್ತು ಅಸ್ತಿತ್ವದಲ್ಲಿರುವ ನೀರಿನ ಪೂರೈಕೆಯ ಒತ್ತಡವನ್ನು ಕಡಿಮೆಮಾಡಲು ಮಳೆ ನೀರು ಕೊಯ್ಲುವಿನ ಸಹಾಯವಾಣಿ ಕೇಂದ್ರ ಒಂದೆ ಸೂರಿನಡಿ ದೊರೆಯುವ ಪರಿಹಾರವಾಗಿ ಹೊರಹೊಮ್ಮಿದೆ.

ಡಾ.ಯು.ಟಿ.ವಿಜಯ್

ಮುಖ್ಯ ವೈಜ್ಞಾನಿಕ ಅಧಿಕಾರಿ ಮತ್ತು

ಪ್ರಧಾನ ಸಂಶೋಧಕರು - ಮಳೆ ನೀರು ಕೊಯ್ಲು ಕೇಂದ್ರ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಸಂಸ್ಥೆ
ಬೆಂಗಳೂರು  - 560012
Ph-080-23348848, 23341652, Mob:09880984766

 

E-mail : utv@kscst@ka.gov.inutv@kscst.org.in, rwhcell@kscst.org.in

 

ಮಳೆ ನೀರು ಕೊಯ್ಲು ಕೇಂದ್ರ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ತನ್ನ ಆರಂಭದಿಂದಲೂ ಪರಿಸರ ಸ್ನೇಹಿ, ಜಲ ಸಂರಕ್ಷಣೆ, ಇಂಧನ  ಹಾಗು ಇತರೆ ಸಾಮಾಜಿಕ ಪ್ರಯೋಜನ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿ ಸಲಹೆಗಳು ಹಾಗೂ ಪರಿಹಾರಗಳನ್ನು ಒದಗಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ನೀರು ಭೂಮಂಡಲದ ಸಕಲ ಜೀವರಾಶಿಗಳಿಗೆ ತುಂಬಾ ಅವಶ್ಯಕ ನೈಸರ್ಗಿಕ ಸಂಪನ್ಮೂಲವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ಜಾಗತಿಕವಾಗಿ ನೀರಿನ ಅಭಾವ ಎದುರಾಗಿದೆ. ಜನರ ನೀರಿನ ಸದ್ಬಳಕೆಯ ಅಗತ್ಯತೆ, ಸಮಪಾಲುಗಳನ್ನು ಅರಿತು ಅಧ್ಯಯನ ಮಾಡಿ ಆಧುನಿಕವಾದ ಸುಸ್ಥಿರ, ಸರಳ ಪರಿಹಾರಗಳೊಂದಿಗೆ ಮಳೆನೀರು ಸಂಗ್ರಹಣೆ ಹಾಗು ಅಂತರ್ಜಲ ಮರುಪೂರಣ ವಿಧಾನಗಳನ್ನು ಅವರ ಅನುಕೂಲಕ್ಕೆ ಅನುಗುಣವಾಗಿ ನೆರವು ನೀಡಲು ಮಳೆನೀರು ಕೊಯ್ಲು ಕೇಂದ್ರವನ್ನು 2005 ರಲ್ಲಿ ಸ್ಥಾಪಿಸಲಾಯಿತು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ ಸ್ಥಾಪಿತವಾಗಿರುವ   ಮಳೆನೀರು ಕೊಯ್ಲು ಕೇಂದ್ರವು ಕರ್ನಾಟಕ ಮತ್ತು ಇತರೆ ರಾಜ್ಯಗಳ ಸರಕಾರಿ ಇಲಾಖೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ  ನೀರಿನ  ಸಂಗ್ರಹಣೆ, ಸಂರಕ್ಷಣೆ ಹಾಗು ಮಳೆನೀರು ಕೊಯ್ಲು ಕಾರ್ಯಕ್ರಮಗಳ ಅರಿವು ಮೂಡಿಸುವುದು, ತರಬೇತಿ ನೀಡುವುದು ಮತ್ತ ತಾಂತ್ರಿಕ ಸಾಹಾಕಾರ ನೀಡುತ್ತಾ, ಸರ್ಕಾರದ ಕಾರ್ಯನೀತಿಯನ್ನು ಅಳವಡಿಸುವಲ್ಲಿ ಬೆಂಬಲ ಒದಗಿಸಿದೆ. ಮಳೆನೀರು ಕೊಯ್ಲು ಕೇಂದ್ರವು ಸಿದ್ದಪಡಿಸಿದ ಮಾರ್ಗಸೂಚಿಗಳು ರಾಜ್ಯ ಸರ್ಕಾರದ ಖಾಯಿದೆಗಳ ತಿದ್ದುಪಡಿ ಮಾಡಿ ಎಲ್ಲಾ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಉದ್ಯಾನವನಗಳು, ರಸ್ತೆಗಳು ಮತ್ತು ತೆರೆದ ಸ್ಥಳಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಹೊಸ ಕಾರ್ಯನೀತಿಯನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಮಳೆನೀರು ಕೊಯ್ಲು ಕೇಂದ್ರವು ರಾಜ್ಯದ  ಸುಮಾರು 500ಕ್ಕೂ ಅಧಿಕ  ಸರಕಾರಿ ಕಛೇರಿ, ಸಾರ್ವಜನಿಕ,  ಖಾಸಗಿ ವಲಯ, ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಮಳೆನೀರು ಕೊಯ್ಲು ವ್ಯವಸ್ಥೆಯನ್ನುಅಳವಡಿಸಲು ತಾಂತ್ರಿಕ ಬೆಂಬಲವನ್ನು ಒದಗಿಸುತ್ತಾ ಬಂದಿದೆ. ಹಲವಾರು ಸಂದರ್ಶಕರು ಖುದ್ದಾಗಿ ಮಂಡಳಿಗೆ ಭೇಟಿನೀಡಿ ಮಳೆನೀರು ಸಂಗ್ರಹಣೆ ಹಾಗು ಅಂತರ್ಜಲ ಮರುಪೂರಣ ವ್ಯವಸ್ಥೆ ಬಗೆಗಿನ ವೈಜ್ಞಾನಿಕ ಮಾಹಿತಿಯಾನ್ನು ಪಡೆದು ಮಳೆನೀರು ಕೊಯ್ಲು ಕೇಂದ್ರದ ಉಪಯೋಗವನ್ನು ಪಡೆದುಕೊಂಡಿದ್ದಾರೆ.

 ಬೆಂಗಳೂರು ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ ಸ್ಥಾಪಿತವಾಗಿರುವ   ಮಳೆನೀರು ಕೊಯ್ಲು ಕೋಶದ ಸಹಯೋಗದೊಂದಿಗೆ ಬೆಂಗಳೂರಿನ ಸರಕಾರಿ ಹಾಗೂ ಖಾಸಗಿ ಆಸ್ತಿಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಖಾಯಿದೆವೊಂದನ್ನು ಜಾರಿಗೆ ತಂದಿದೆ. ಮಂಡಳಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸುಮಾರು 1,75,000ಕ್ಕೂ ಅಧಿಕ ಮನೆಗಳಲ್ಲಿ   ಮಳೆನೀರು ಕೊಯ್ಲು ವ್ಯವಸ್ಥೆ ಹಾಗೂ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.

ಮಂಡಳಿಯು ಅಭಿಯಂತರರು, ಆರ್ಕಿಟೆಕ್ಟ್‌ಗಳು ಮತ್ತು ಕೊಳಾಯಿ ಗುತ್ತಿಗೆದಾರರಿಗೆ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ವ್ಯವಸ್ಥೆಯ ಬಗ್ಗೆ ತಾಂತ್ರಿಕ ತರಬೇತಿ ನೀಡಲು ಕೌಶಲ್ಯಾಭಿವೃದ್ದಿ ಕಾರ್ಯಕ್ರಮವನ್ನು ಪ್ರತಿ 3 ತಿಂಗಳಿಗೊಮ್ಮೆ ಆಯೊಜಿಸಲಾಗುತ್ತಿದ್ದು ಆರಂಭದಿಂದ ಒಟ್ಟು 86 ತರಬೇತಿ ಕಾರ್ಯಕ್ರಮಗಳನ್ನು ಮಾಡಲಾಗಿದ್ದು ಸುಮಾರು 2700 ಮಂದಿ ತರಬೇತಿಯನ್ನು ಪಡೆದಿದ್ದು ಅವರು ತಮ್ಮ ವೃತ್ತಿಪರ ಸೇವೆಯನ್ನು ನೀಡುತ್ತಿದ್ದಾರೆ.

ಮಂಡಳಿಯು ಸಾರ್ವಜನಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೆಬ್‌ ಮತ್ತು ಮೊಬೈಲ್‌ ಆಪ್‌ನ್ನು ಯುನೆಸ್ಕೋದ (UNESCO) ಬೆಂಬಲದೊಂದಿಗೆ ಅಭಿವೃದ್ದಿಪಡಿಸಲಾಗಿದ್ದು. “ಡು ಇಟ್‌ ಯುವರ್ಸೆಲ್ಫ್‌ ಆರ್‌ ಡಬ್ಲ್ಯೂ ಹೆಚ್ಚ್‌ ಟೂಲ್‌ - ಆರ್‌ ಡಬ್ಲ್ಯೂ ಹೆಚ್ಚ್‌ ಅಡ್ವ್ಯಸರ್”‌ ಅನ್ನು ಅಭಿವೃದ್ದಿಪಡಿಸಿ  ಬಿಡುಗಡೆ ಮಾಡಲಾಗಿದೆ. ಈ ಆಪ್‌ನ ಸಹಕಾರದಿಂದ ದೇಶದ ಯಾವಭಾಗದಲ್ಲಾದರೂ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಮಳೆನೀರಿನ ಲಭ್ಯತೆ. ಸಂಗ್ರಹಣಾ ಸಾಂದ್ರತೆ, ಸಾಮರ್ಥ್ಯ,  ತಗುಲುವ ವೆಚ್ಛ ಇತರೆ ತಾಂತ್ರಿಕ ವಿವರಗಳನ್ನು ಪಡೆಯಬಹುದಾಗಿದೆ.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ    ಮಳೆನೀರು ಕೊಯ್ಲು ಬಗ್ಗೆ ಜಾಗೃತಿ ಮೂಡಿಸಲು ರಸಪ್ರಶ್ನೆ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು. ಸುಮಾರು 100 ಕ್ಕೂ ಹೆಚ್ಚು ರಸಪ್ರಶ್ನೆ ಮತ್ತು ಚರ್ಚಾ ಕಾರ್ಯಕ್ರಮಗಳನ್ನು, ಅರಿವು ಮೂಡಿಸುವ ಕಾರ್ಯಗಾರಗಳನ್ನು  ಬೆಂಗಳೂರಿನ ಹಲವಾರು ಖಾಸಗಿ ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ 2013ರಿಂದ ನಡೆಸುತ್ತಾ ಬಂದಿದೆ. 15000ಕ್ಕೂ ಅಧಿಕ ವಿಧ್ಯಾರ್ಥಿಗಳು ಹಾಗು 300 ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿ ಉಪಯೋಗವನ್ನು ಪಡೆದಿರುತ್ತಾರೆ. ಈ ಕಾರ್ಯಾಕ್ರಮಗಳನ್ನು ನಿಸರ್ಗ ಮಹಿಳಾ ಸಮಾಜದ 150 ಸ್ವಯಂಸೇವಕರ ಸಹಾಯದೊಂದಿಗೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಮಳೆನೀರು ಕೊಯ್ಲು ಉತ್ತೇಜಿಸಲು ಹಲವಾರು ಉಪನ್ಯಾಸಗಳು, ಕಾರ್ಯಗಾರಗಳು ಮತ್ತು ವಸ್ತುಪ್ರದರ್ಶನಗಳನ್ನು ರಾಜ್ಯಾದ್ಯಂತ ಆಯೋಗಿಸುತ್ತಾ ಬಂದಿದೆ ಹಾಗು ಬಹಳಷ್ಟು ಪತ್ರಿಕೆ ಲೇಖನಗಳು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ಸಹ ನೀಡುತ್ತಾ ಬಂದಿದೆ. ತಾಂತ್ರಿಕ ಬೆಂಬಲ ಮತ್ತು ಸಂವಹನವನ್ನು ಇಮೇಲ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿ ಮೂಲಕ ಒದಗಿಸಲಾಗುತ್ತಿದೆ.

 

×
ABOUT DULT ORGANISATIONAL STRUCTURE PROJECTS